ಕಪ್ಲಾನ್ ತಿರುಬಾನಿ : ನೀರಿನ ಎತ್ತರ ಕಡಿಮೆ ಇರುವಾಗ ನೀರೆತ್ತಲು ಬಳಸುವ ಜಲಯಂತ್ರ (ಕಪ್ಲಾನ್ ಟರ್ಬೈನ್). ಇದರ ಚಕ್ರ ಹಡಗು ಇಲ್ಲವೇ ವಿಮಾನದ ಚಾಲಕಗಳ (ಪ್ರೊಪೆಲ್ಲರ್ಸ್‌) ಮಾದರಿಯಲ್ಲಿ ಇದೆ. ಇದರಲ್ಲಿ ಕಡಿಮೆ ಸಂಖ್ಯೆಯ-ಸಾಧಾರಣವಾಗಿ ನಾಲ್ಕರಿಂದ ಆರರವರೆಗೆ-ಅಲಗುಗಳಿವೆ. ಇವು ಚಲನೆಯಲ್ಲಿದ್ದಂತೆಯೇ ತಮ್ಮ ಅಕ್ಷದ ಮೇಲೆ ತಿರುಗಬಲ್ಲವು. ಆದ್ದರಿಂದ ಸಾಮಥರ್ಯ್‌ದ ಉತ್ಪನ್ನಕ್ಕೆ ಅನುಸಾರವಾಗಿ ಅಲಗುಗಳ ಕೋನಗಳನ್ನು ಬದಲಾಯಿಸುವುದು ಸಾಧ್ಯ. ಅಲಗುಗಳನ್ನು ತಿರುಗಿಸುವ ಯಂತ್ರ ಸಂವಿಧಾನ ಚಕ್ರದ ನಾಭಿಯೊಳಗೆ ಅಡಕವಾಗಿದೆ. ತಿರುಬಾನಿಯ ನಿಯಾಮಕವು ಸರ್ವೋ ಮೋಟಾರಿನ ಮೂಲಕ ಈ ಯಂತ್ರಭಾಗವನ್ನು ನಿಯಂತ್ರಿಸುವುದು. ಇಂಥ ಸ್ವಯಂಚಾಲಿತ ಯಂತ್ರವ್ಯವಸ್ಥೆ ಇರುವುದರಿಂದ ತಿರುಬಾನಿ ಉತ್ಪಾದಿಸುತ್ತಿರುವ ಸಾಮಥರ್ಯ್‌ ಎಷ್ಟೇ ಆಗಿರಲಿ ಅದರ ಕಾರ್ಯ ಕ್ಷಮತೆ ಹೆಚ್ಚು ಕಡಿಮೆ ಏಕಪ್ರಕಾರವಾಗಿರುತ್ತದೆ. ನೀರಿನ ಎತ್ತರ 9'-50' ಗಳಿರುವ ಕಡೆಗಳಲ್ಲಿ ಕಪ್ಲಾನ್ ತಿರುಬಾನಿಯನ್ನು ಉಪಯೋಗಿಸಬಹುದು. 25' ವ್ಯಾಸದ ಚಕ್ರ ಇರುವ 7,000 ಅಶ್ವಸಾಮಥರ್ಯ್‌ವನ್ನು ಉತ್ಪನ್ನ ಮಾಡುವ ಯಂತ್ರಗಳು ಉಪಯೋಗ ದಲ್ಲಿವೆ. ಕಪ್ಲಾನ್ ತಿರುಬಾನಿಗಳ ಕಾರ್ಯಕ್ಷಮತೆಯ ಗರಿಷ್ಠ ಪ್ರಮಾಣ ಶೇ. 90 ಕ್ಕಿಂತಲೂ ಹೆಚ್ಚು.                                                       	(ಬಿ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ